ವೆಂಕಟಾಚಲನಿಲಯಂ ವೈಕುಂಠಪುರವಾಸಮ್ |
ಪಂಕಜನೇತ್ರಮ್ ಪರಮ ಪವಿತ್ರಮ್ ಶಂಖಚಕ್ರಧರ ಚಿನ್ಮಯ ರೂಪಂ ||
ಅಂಬುಜೋದ್ಭವ ವಿನುತಮ್ ಅಗಣಿತಗುಣನಾಮಮ್ |
ತುಂಬುರುನಾರದಗಾನವಿಲೋಲಮ್ ||
ಮಕರ ಕುಂಡಲಧಾಮ ಮದನಗೋಪಾಲಮ್ |
ಭಕ್ತ ಪೋಷಕ ಶ್ರೀಪುರಂದರವಿಟ್ಠಲಮ್ ||
ಪುರಂದರ ದಾಸರು ಬರೆದ ಏಕಮಾತ್ರ ಸಂಸ್ಕೃತ ಕ್ಱತಿ ಎಂಬ ಹೆಗ್ಗಳಿಕೆ ಈ ಹಾಡಿದ್ದು.
(ಪದುಮನಾಭ ಪರಮಪುರುಷ ಬರೆದದ್ದು ಇವರೇ ಎಂಬುದರ ಬಗ್ಗೆ ಚರ್ಚೆ ಇದೆ. ಅಲ್ಲದೆ 'ಪದುಮ' ಇದು ಕನ್ನಡ ಪದವಾಯಿತು)
ಯಾವ ಮನಃಸ್ಥಿತಿಯಲ್ಲಿ ಕೇಳಿದರೂ ತುಂಬಾ ತುಂಬಾ ಆಪ್ತವೆನ್ನಿಸುವ ಹಾಡು ಇದು. ಮಕರಕುಂಡಲಧಾಮ ಮದನಗೋಪಾಲನು ಹರಿಹರಿದು ಬಂದು ಎದೆಯೊಳಗೆ ಬೆಣ್ಣೆಯನ್ನು ಜಿನುಜಿನುಗಿಸಿದಂತೆ. ಎದೆಯು ಬಯಲಾಗಿ ಬೆಣ್ಣೆ ಅಲ್ಲಿ ತುಪ್ಪವಾಗಿ ನೊರೆನೊರೆಯಾದಂತೆ.
ಪುರಂದರರ ಹೃದಯದಿಂದ ವಿಟ್ಠಲನಿಗಾಗಿ ತುಪ್ಪದ ಸಿಂಧುವನ್ನೇ ಹರಿಸಿದ ಸಿಂಧುಭೈರವಿಯೇ ಧನ್ಯೆ, ಕೇಳಿ ಆರ್ತರಾಗುವ ನಾವೂ ಧನ್ಯರು.
ಎಮ್.ಎಲ್.ವಸಂತಕುಮಾರಿಯವರು ಹಾಡಿದ್ದರ ಯೂಟ್ಯೂಬ್ ಕ್ಲಿಪ್ಪಿಂಗ್ ಕೊಟ್ಟಿದೆ.
Sunday, February 1, 2009
Thursday, December 25, 2008
ಒಳಿತಾಗಲೀ ಕೊರಳ ದಾರದಿಂದ
ಇದುವರೆಗೆ ಒಬ್ಬನೇ ನಡೆದೆ. ಇನ್ನು ಈ ಸಂಚಲನೆಯಲ್ಲಿ ನನ್ನ ಜೊತೆ ಕಾಲು ಹಾಕಲು ಜನವರಿ ೮ಕ್ಕೆ ಜೊತೆಗಾತಿಯೊಬ್ಬಳು ಬರಲಿದ್ದಾಳೆ.
"ಮಾಂಗಲ್ಯಮ್ ತಂತುನಾನೇನ" ಎನ್ನುವ ಹಾರುವರ ಗಾನಕ್ಕೆ ಸರಿಯಾಗಿ ಜತೆಗೂಡಲಿರುವ ನಮ್ಮಿಬ್ಬರ ಮೇಲೆ ನಿಮ್ಮೆಲ್ಲರ ಹಾರೈಕೆಯಿರಲಿ.

Tuesday, July 10, 2007
ಹೀಗೊಂದು ಇಂಡಿಕೇಟರ್

ಇವತ್ತು ಬೆಳಗ್ಗೆಯಷ್ಟೇ ನಡೆದ ಕಥೆ!
ಕಾರಣಾಂತರಗಳಿಂದ ನನ್ನ ಕ್ಯಾಲಿಬರ್‌ಬೈಕ್‌ನ ಬದಲು ಗೆಳೆಯನ ಪಲ್ಸರ್‌ಅನ್ನು ಚಲಾಯಿಸಿಕೊಂಡು ಆಫೀಸಿಗೆ ಬರುತ್ತಿದ್ದೆ. ಪವರ್ ಬೈಕ್ ಆದ್ದರಿಂದ ಸಹಜವಾಗಿಯೇ ಅದರ ವೇಗವನ್ನು, ಪಿಕಪ್‌ಅನ್ನು ಆನಂದಿಸಿಕೊಂಡು ರೊಯ್ಯನೆ ತೂರಿಬರುತ್ತಿದ್ದೆ. ರಿಂಗ್ ರೋಡ್ ದಾಟಿದ ನಂತರ ಸ್ವಲ್ಪ ಮುಂದೆ ಬಂದರೆ ಬಲಗಡೆ ತಿರುವು. ನನಗಿಂತ ಸ್ವಲ್ಪ ಮುಂದೆ ಇನ್ನೊಬ್ಬ-ನಮ್ಮಾಪೀಸಿನವನೆ- ಯೂನಿಕಾರ್ನ್ ಓಡಿಸ್ತಾ ಇದ್ದ. ಜೊತೆಗೆ ಇನ್ನೊಬ್ಬ ಬೈಕ್‌ಸವಾರನೊಡನೆ ಮಾತಾಡುತ್ತಾ ಜುಗಲ್‌ಬಂದಿ ಮಾಡಿಕೊಂಡು ಹೋಗುತ್ತಿದ್ದ.
ನನ್ನ ದೃಷ್ಟಿ ಹೋದುದು ಅವನ ಬೈಕಿನ ಇಂಡಿಕೇಟರ್ ಕಡೆಗೆ. ಬಲಗಡೆಯ ಲೈಟು ಪುಳು-ಪುಳು ಮಾಡ್ತಾ ಇತ್ತು. ಇನ್ನೂ ಆಫ್ ಮಾಡಿರಲಿಲ್ಲ. ಯಥಾಪ್ರಕಾರ ನನ್ನ ಅಭ್ಯಾಸದಂತೆ ಮನಸ್ಸಿನಲ್ಲೇ ಟೀಕಿಸಲು ಆರಂಭಿಸಿದೆ. "ರೋಡ್ ಸೆನ್ಸ್ ಅನ್ನೋದು ಸ್ವಲ್ಪವೂ ಇಲ್ಲ ಈ ಜನಗಳಿಗೆ. ಮಾತಿಗೊಬ್ಬ ಸಿಕ್ಕಿದ್ರೆ ಮುಗೀತು, ಲೋಕದ ಪರಿವೆಯೇ ಇಲ್ಲ. ಇಂಥವರದ್ದೆಲ್ಲ ಲೈಸೆನ್ಸ್ ಕ್ಯಾನ್ಸಲ್ ಮಾಡಿಸಬೇಕು. ಪರಿಸರಮಾಲಿನ್ಯ ಆದ್ರೂ ಕಡಿಮೆ ಆಗ್ತದೆ ಕೊನೆಗೆ" ಎಂದೆಲ್ಲಾ ಲೆಕ್ಚರ್ ನನಗೇ ನಾನು ಕೊಟ್ಟುಕೊಳ್ಳುತ್ತಿದ್ದೆ. ಅಲ್ಲದೆ ನನ್ನ ರೈಡಿಂಗ್ ಪರ್‌ಫೆಕ್ಷನ್ ಬಗೆಗೊಂದು ಮೀಸೆ ತಿರುವುವ ಹೆಮ್ಮೆ. ಇನ್ನೂ ವಿವೇಚಿಸಿ ನೋಡಿದರೆ, ಅದೇನೂ ಅವನ ಮೇಲಿನ ಅಸಮಾಧಾನದಿಂದ ಬಂದ ಕೊರೆದಾಟ ಅಲ್ಲ; ನನ್ನ ಬಗ್ಗೆ ಇರುವ ಮೇಲರಿಮೆ ಅಷ್ಟೆ. ಪುಣ್ಯಕ್ಕೆ ನನ್ನ ಹಿಂಬದಿ ಯಾರೂ ಕೂತಿರಲಿಲ್ಲ, ಇಲ್ಲದಿದ್ರೆ ಈ ಮೂದಲಿಕೆ ಕೇಳುವುದು ಅವನ ಗ್ರಹಚಾರ ಆಗ್ತಿತ್ತು!
ಎಲ್ಲಿತ್ತೋ ಏನೋ ಜೋಷ್. ಒಮ್ಮೆಲೇ ಆಕ್ಸಲರೇಟರ್ ಪೀಂಟಿಸಿ (ತಿರುಗಿಸುವುದಕ್ಕೆ ನಮ್ಮೂರ ಕಡೆಯಿರುವ ಪದ) ಝುಂಯ್ ಶಬ್ದ ಮಾಡುತ್ತಾ ಅವನನ್ನು ಓವರ್‌ಟೇಕ್ ಮಾಡಿದೆ. ಮಾಡುವಾಗ ಎಡಗೈಯನ್ನು ಸ್ಟೈಲಾಗಿ ಕೆಳಗೆ ಚಾಚಿ ಲೈಟ್ ಆನ್ ಆಗಿರುವ ಸಂಜ್ಞೆ ಕೊಟ್ಟು ಮತ್ತಷ್ಟು ವೇಗವಾಗಿ ಓಡಿಸಿದೆ. "ನಿನಗೇನೂ ನಾನು ಸಹಾಯ ಮಾಡ್ತಾ ಇಲ್ಲ, ನನ್ನ ಕರ್ತವ್ಯ ಅಂತ ತೋರಿಸ್ತಿದ್ದೀನಿ ನೋಡ್ಕೋ" ಅನ್ನುವ ನಿಕೃಷ್ಟತೆಯ ಭಾವ ಅವನ ಕಡೆಗೆ.
ಒಂದು ೫೦ ಮೀಟರ್ ಮುಂದೆ ಹೋಗಿರಬಹುದು. ಸ್ಪೀಡ್ ನೋಡಲು ಕಂಟ್ರೋಲ್ ಪ್ಯಾನೆಲ್ ಕಡೆಗೆ ದೃಷ್ಟಿ ಹೋಯಿತು. ಹಾ ಏನದು! ಪುಳ್-ಪುಳ್-ಪುಳ್ ಅಂತ ಆನ್-ಆಫ್ ಆಗ್ತಾ ಇದೆ; ಇಂಡಿಕೇಟರ್‌ನ ಇಂಡಿಕೇಟರು. ಅಷ್ಟೆ! ನನ್ನ ಸ್ಪೀಡು, ಹುಮ್ಮಸ್ಸು, ಉತ್ಸಾಹ, ಹೆಮ್ಮೆ, ಪರ್‌ಫೆಕ್ಷನ್ ಎಲ್ಲ ಜರ್ರನೆ ಇಳಿಯಿತು. ಹೆಲ್ಮೆಟ್ ಒಳಗಿಂದ್ಲೂ ಯಾರೋ ಝಾಡಿಸಿ ಕಪಾಳಕ್ಕೆ ಹೊಡೆದ ಹಾಗೆ. ಕೂಡಲೇ ಸ್ವಿಚ್ ಆಫ್ ಮಾಡಿ ಹಿಂಗನ್ನಡಿ ನೋಡಿದೆ. ಅವನ ಜುಗಲ್‌ಬಂದಿ ಬೈಕಿನವನ ಜೊತೆ ನನ್ನನ್ನು ಅಣಗಿಸಿ ನಗುತ್ತಿದ್ದ. ಅಥವಾ ನನಗೆ ಹಾಗೆ ಕಂಡಿತು.
ನನಗೆ ಮೈಯೆಲ್ಲ ಅದೆಷ್ಟು ಞರಞರವಾಗಿತ್ತೆಂದರೆ ಇಂಡಿಕೇಟರ್ ಸ್ವಿಚ್ಚನ್ನು ಅದೆಷ್ಟು ಸಲ ಒತ್ತಿ ಒತ್ತಿ ಆಫ್ ಆದದ್ದನ್ನು ಖಚಿತಪಡಿಸಿಕೊಂಡೆನೋ ಗೊತ್ತಿಲ್ಲ.
ಇಂಡಿಕೇಟರ್ ಲೈಟು ನನ್ನ ಬದುಕಿನೆಡೆಗೆ ಏನೋ ಇಂಡಿಕೇಟ್ ಮಾಡುತ್ತಿತ್ತು.
Wednesday, July 4, 2007
ಆತ್ಮಯೋನಿಯೂ ಅಲ್ಲ, ಸ್ವಯಂಜಾತನೂ ಅಲ್ಲ.
ಆಸ್ಪತ್ರೆ ಕೋಣೆಯ ಆ ಕುರ್ಚಿಯಲ್ಲಿ ಬೆನ್ನೊರಗಿಸಲಾಗದೇ ಬಗ್ಗಿ ಕುಳಿತ ದೇಹ, ದೇಹಕ್ಕೆ ನೇತುಕೊಂಡ ಬಲವಿಲ್ಲದ ಬಲಗೈ, ಎಡಗೈಗೆ ಶಕ್ತಿಯಿದ್ದರೂ ಆ ಶಕ್ತಿಯ ಪರಿವೆಯಿಲ್ಲದ ಅರಿವು, ನಡೆಯಲಾಗದ ಕಾಲ್ಗಳು, ನಗುಮಾಸಿದ ಕಳೆಹೀನ ಮೊಗ, ಮಾತಿರಲಿ,ನರಳಿಕೆಯೂ ಹೊರಡದೆ ಇಂಗಿದ ದನಿ...ಇನ್ನೂ ಎಷ್ಟೆಂದು ಹೇಳಲಿ, ಯಾಕಾಗಿ ಬರೆಯಲಿ; ಜೀವದಲ್ಲಿ ಚೈತನ್ಯ ಇನ್ನೂ ಉಳಿದಿರುವುದನ್ನು ಹೇಳುತ್ತಿದ್ದುದು ಆ ಕಣ್ಣುಗಳು ಮಾತ್ರ. ಸಾವಿರ ಭಾವನೆಗಳನ್ನು, ನೂರಾರು ನೋವುಗಳನ್ನು, ಬೇಕುಬೇಡಗಳನ್ನು ಒಂದೊಂದು ಪಿಳಿಪಿಳಿಯಲ್ಲೂ ಒತ್ತಿ ಒತ್ತಿ ಸಾರುತ್ತಿದ್ದ ಅವು....ಓ ಅದನ್ನು ಹೇಳಲಾಗದ ಅಸಹಾಯಕತೆ...ನೋಡಿಯೂ ತಿಳಿಯಲಾಗದ ನನ್ನ ಅಶಕ್ತತೆ - ಆಕೆಗಿಂತಲೂ ಬಲಹೀನ ನಾನಾಗಿದ್ದೆ.
ಆ ಕಂಗಳು ಒಮ್ಮೆ ನನ್ನ ಕಣ್ಣೊಳಗೆ ತೂರಿ ನೋಡುತ್ತಿದ್ದವು. ಮತ್ತೊಮ್ಮೆ ಕೆಳಗೆ. ಮತ್ತೆ ಆ ಕಡೆಯೆಲ್ಲೋ. ಮುಖ ಮಾತ್ರ ಇದ್ದಲ್ಲೆ. ತಗ್ಗಿದ ಆ ಮುಖದಿಂದಲೇ ಮತ್ತೊಮ್ಮೆ ನನ್ನನ್ನು ಹೀರುವ ನೋಟ. ನನಗದು ಎಂಥ ಸಂಕಟ. ಆ ಎರಡು ಮೂರು ಕಡೆ ನೊಡುವುದರಲ್ಲಿಯೇ ಹುದುಗಿರುವ ಮಾತುಗಳನ್ನು ಹೇಗೆ ಅರ್ಥೈಸಲಿ ನಾನು. ಬಾಯಿ ಆರಿದ್ದಕ್ಕೆ ನೀರು ಬೇಕೇ, ಕೂತು ಸುಸ್ತಾಗಿ ಮಲಗಬೇಕೇ, ಕಾಲಿಗೆ ನುಸಿ ಕಚ್ಚುತ್ತಿದೆಯೇ, ತಲೆ ನೋವೇ, ಜಲಬಾಧೆಯೇ - ಇದನ್ನೆಲ್ಲ ಯಾರಲ್ಲಿ ಕೇಳಲಿ?
ತಾಯಿಗೆ ಮಗುವಿನ ಅಳುವಿನಿಂದಲೇ ಅದರ ಬೇಕುಗಳು ತಿಳಿಯುತ್ತವೆಯಂತೆ. ಆದರೆ ಇಲ್ಲಿ? ಸಹಿಸಲಾಗಲಿಲ್ಲ ನನಗೆ. ಮನುಷ್ಯನಿಗೆ ತನ್ನ ಮಿತಿಯ ಮತ್ತು ಇನ್ನೊಂದು ಅನಂತ ಶಕ್ತಿಯ ಅರಿವಾಗುವುದು ಇಂಥ ಸಂದರ್ಭದಲ್ಲೇ. ದೊಡ್ಡದಾಗಿ, ಕಾತರದಿಂದ ನೋಡುವ ಆ ಕಣ್ಣುಗಳು ಏನನ್ನೆಲ್ಲ ತಿಳಿಸಲು ಸಾಧ್ಯ? ನಾನು ಪ್ರಾರ್ಥನೆಯೊಂದನ್ನು ಬಿಟ್ಟು ಬೇರೇನೂ ಮಾಡಲು ಸಾಧ್ಯವಿರಲಿಲ್ಲ. ಚಲಿಸದ ಆ ಬಲ ಅಂಗೈಯನ್ನು ನನ್ನ ಎಡಗೈಯಲ್ಲಿಟ್ಟು, ಬಲಗೈಯನ್ನು ಆ ತಲೆಯ ಮೇಲಿಟ್ಟು ವಿಷ್ಣು ಸಹಸ್ರನಾಮ ಹೇಳಲು ಆರಂಭಿಸಿದೆ - "ಓಮ್ ವಿಶ್ವಂ ವಿಷ್ಣುರ್ವಷಟ್ಕಾರೋ..." ವಿಧಿಯು ಆಕೆಯ ತಲೆಯೊಳಗೆ ಇಟ್ಟ ಕೈಯನ್ನು ಪರಮಾತ್ಮನ ಕರಾವಲಂಬನದಿಂದ ತೆಗೆಯಲಾರೆನೆ - ಎಂಬ ಸೊಡರಿನ ಮಿಣುಕು ಆ ಮಬ್ಬುಗತ್ತಲನ್ನೂ ದೂರಮಾಡಿತ್ತು. ಭಗವಂತನ ಒಂದೊಂದು ಹೆಸರನ್ನೂ ಸಾಧ್ಯವಾದಷ್ಟೂ ಮನಸ್ಸಿಟ್ಟು ಹೇಳುತ್ತಿದ್ದೆ. ಅಷ್ಟು ತಾದಾತ್ಮ್ಯ ಈ ಮೊದಲು ಬಂದದ್ದು ಗೊತ್ತಿಲ್ಲ. ಆಕೆಯ ಕಣ್ಣುಗಳಲ್ಲೇನೋ ಚಡಪಡಿಕೆ, ಹುಡುಕಾಟ, ಹುಡುಕಿದ್ದು ಸಿಗದೇ ತೊಳಲುತ್ತಿದ್ದ ಆ ದೃಷ್ಟಿ! ಯಾಕೋ ಆಕೆಯೂ ನನ್ನೊಂದಿಗೆ ಸ್ತೋತ್ರ ಹೇಳುವುದರಲ್ಲಿ ಸ್ಪಂದಿಸುವ ಒಳಾನುಭವ ನನಗಾಗುತ್ತಿತ್ತು. ಹೌದು, ಅವಳು ಕಣ್ಣುಗಳಲ್ಲೇ ನನ್ನ ಜೊತೆ ಪಠಿಸುತ್ತಿದ್ದಳು.’...ವೇದ್ಯೋ ವೈದ್ಯಃ ಸದಾಯೋಗೀ..’; ’ಹೇ ಕೃಷ್ಣಾ, ನೀನೇ ವೈದ್ಯನಾಗಿ ಬರಲಾರೆಯಾ?
ಸ್ತೋತ್ರ ಹೇಳುತ್ತಾ ಹೇಳುತ್ತಾ ಕೊನೆ ತಲುಪುತ್ತಿದ್ದೆ; ನನ್ನ ಕಾತರ ಹೆಚ್ಚಾಯಿತು. ಒಂದೊಂದು ಹೆಸರನ್ನೂ ಅದರ ಪೂರ್ತಿ ಅನುಸಂಧಾನದೊಂದಿಗೆ ಹೇಳತೊಡಗಿದೆ. ಆಕೆಯೂ ಜೊತೆಯಿತ್ತಳು. ಅದು ನನಗೆ ತಿಳಿಯಿತು. "ಆತ್ಮಯೋನಿಃ ಸ್ವಯಂಜಾತೋ..." ಹೌದಲ್ವ ಭಗವಂತ ತಾನೇ ತನ್ನಿರವಿಗೆ, ಹುಟ್ಟಿಗೆ ಯೋನಿಸ್ವರೂಪ; ಆತ ಸ್ವಯಂಜಾತ. ಆದರೆ ನಾನು ಆತ್ಮಯೋನಿಯೂ ಅಲ್ಲ, ಸ್ವಯಂಜಾತನೂ ಅಲ್ಲ! ಅದರ ಮುಂದಿನ ಸಾಲಲ್ಲೇ ’ದೇವಕೀನಂದನಃ ಸ್ರಷ್ಟಾ’ ಆಹ್! ಎಂತಹ ಸ್ವಯಂಭುವಾದರೇನಾಯಿತು- ಆತ ಕೊನೆಗೂ ದೇವಕಿಯ ನಂದನನೇ....ಹುಟ್ಟಿದಾಗ ದೂರವಾದರೂ ಕೊನೆಗೆ ಆ ತಾಯಿಯನ್ನೇ ಸೇರಿದ. ಇದನ್ನು ಯೋಚಿಸಿ ನನಗೆ ಎದೆಭಾರ ತಡೆಯಲಾಗಲಿಲ್ಲ. ಆಕೆಯನ್ನು ಗಟ್ಟಿಯಾಗಿ ಅಪ್ಪಿಕೊಂಡೆ; ಕೊನೆಯ ಶ್ಲೋಕವನ್ನು ಗಂಟಲುಕಟ್ಟಿ ಹೇಳಿದೆ-
"ಶಂಖಭೃನ್ನಂದಕೀ ಚಕ್ರೀ ಶಾರ್ಙ್ಗಧನ್ವಾ ಗದಾಧರಃ
ರಥಾಙ್ಗಪಾಣಿರಕ್ಷೋಭ್ಯಃ ಸರ್ವಪ್ರಹರಣಾಯುಧಃ
ಸರ್ವಪ್ರಹರಣಾಯುಧ ಓಮ್ ನಮ ಇತಿ"
ಸರ್ವಾಂಗಸುಂದರನನ್ನು ಬಣ್ಣಿಸುತ್ತಿದ್ದ ನನ್ನ ದನಿ ಕಣ್ಣಹನಿಯಾಗಿತ್ತು. ಆಕೆಯ ಆಳ ಅಪ್ಪುಗೆಯಿಂದ ಹೊರಬಂದು ನೋಡುತ್ತೇನೆ- ಭಾವನೆಗಳು ಇಂಗಿದ್ದ ಆ ಜೀವದ ದೊಡ್ಡ ದೊಡ್ಡ ಕಣ್ಣುಗಳ ತುಂಬಾ ಬೊಗಸೆ ಬೊಗಸೆ ನೀರು !

Monday, June 25, 2007
ಒಂದು ಕೂದಲು ಸೀಳುವ ವಿಮರ್ಶೆ
ಛೆ! ತಲೆಬಿಸಿ ಮಾಡಬೇಡಿ. ಅಂಥ ಚಿತ್ರಹಿಂಸಾತ್ಮಕ ವಿಮರ್ಶೆಯನ್ನೇನೂ ಮಾಡಲು ಹೊರಟಿಲ್ಲ ನಾನು. ಅದಕ್ಕೆಲ್ಲ ತಲೆಯೊಳಗೆ ಮಿದುಳಿನ ಅಂಶವೂ ಇರಬೇಕು ಎಂಬ ಪರಿಜ್ಞಾನ ಉಂಟು ನನಗೆ. ಇದು ವಾಸ್ತವದಲ್ಲಿ 'ಕೂದಲು ಸೀಳುವ' ಬಗ್ಗೆ ಒಂದು "ವಿಮರ್ಶಾತ್ಮಕ" ಲೇಖನ ಅಷ್ಟೆ. ಹಾರ್ಡ್‍ಕೋರ್ ವಿಮರ್ಶಕರಿಗೆ ಇದರ ಬಗೆ ಕೂದಲು ಕೆರೆಯುವ ಕೆಲಸವೇನೂ ಇಲ್ಲ. ಅಂಥಾ ಗಂಭೀರ ವಿಮರ್ಶಕರೆಲ್ಲರ ಕ್ಷಮೆಯನ್ನೂ ಕೇಳಿ ಮುಂದುವರಿಯುತ್ತೇನೆ.
ವಿಷಯ ಏನು ಅಂದ್ರೆ, ಕೆಲವಾರು ಕಡೆಗಳಲ್ಲಿ ನಾನು 'ಕೂದಲು ಸೀಳುವಂಥ ಸಂಕೀರ್ಣ ವಿಮರ್ಶೆಗಳು', ತರ್ಕಕೋವಿದರ 'ಕೂದಲು ಸೀಳುವಂಥ ತಾರ್ಕಿಕ ವಾದಗಳು' ಮುಂತಾದ ನುಡಿಗಟ್ಟುಗಳನ್ನು ಗಮನಿಸುತ್ತಾ ಬಂದಿದ್ದೆ. ಕೂದಲು ಸೀಳುವುದು ದುಸ್ಸಾಧ್ಯ ಕೆಲಸ ಅಂತ ಗೊತ್ತಿದೆ (ಅದನ್ನು ಅಸಾಧ್ಯ ಅನ್ನಲಾರೆ, ಏಕೆಂದರೆ 'ಅಸಾಧ್ಯ' ಅನ್ನುವುದು ನನ್ನ ನಿಘಂಟಿನಲ್ಲೇ ಇಲ್ಲ ಎಂದು ಗುಡುಗುವ ನೆಪೋಲಿಯನ್ ಬೊನಾಪಾರ್ಟೆಗಳ ಘರ್ಜನೆಗೆ ಈ ಬಡಪಾರ್ಟಿ ಬೆದರುತ್ತಾನೆ); ಆದರೂ ಒಮ್ಮೆ ಪ್ರಯತ್ನಿಸಿ ನೋಡಬಾರದೇಕೆ ಎಂದು ಮನಸ್ಸಾಯಿತು. ಮನಸ್ಸಾದ ಮೇಲೆ ಕೈ, ಕಾಲು ಎಲ್ಲ ಆಗಲಿಕ್ಕೆ ಎಷ್ಟು ಹೊತ್ತು ಬೇಕು? ಸರಿ, ಲಾಜಿಸ್ಟಿಕ್ಸಿಗೆ ಹುಡುಕಾಟ ಶುರು. ಕೂದಲು ಸೀಳಲಿಕ್ಕೆ ಯಾವ ಆಯುಧ ಬೇಕು? ಚೂರಿ, ಕತ್ತಿ, ಬಾಕು, ಖಡ್ಗ ಇತ್ಯಾದಿಗಳು ಪುಣ್ಯಕ್ಕೆ ನನ್ನ ಮನಸ್ಸಿಗೆ ಬರಲಿಲ್ಲ. ನೀವು ಊಹಿಸಿದಂತೆ 'ಬ್ಲೇಡು' ಎಂಬ ಬಹೂಪಯೋಗಿ ಸಾಧನವನ್ನೇ ನಾನೂ ಯೋಚಿಸಿದೆ. ಆದರೆ ಆ ಕೆಲಸಕ್ಕಾಗುವ ಬ್ಲೇಡು ನನ್ನ ಕ್ಷೌರಪೆಟ್ಟಿಗೆಯಲ್ಲಿ ಸಿಗಲು ಸಾಧ್ಯವಿಲ್ಲ. ಯಾಕೆಂದರೆ ನಾನು ಗಡ್ಡ ಹೆರೆಯಲು ಶುರು ಮಾಡಿದ್ದೇ 'ವಿಲ್‍ಮನ್ II' ಎಂಬ ಎರಡಲಗಿನ ಬ್ಲೇಡಿನಿಂದ. ಈಗ ಲೋಕ ನನ್ನನ್ನು ಹಿಂದೆ ಹಾಕಿ ತ್ರಿವಳಿ ಅರೆಯ ಬಾಳನ್ನು (ಕ್ಷೌರಿಕರು ಬಳಸುವ ಚೂರಿಯಾಕೃತಿಯ ಬ್ಲೇಡಿಗೆ ಬಾಳು ಅಂತಾರೆ) ಬಳಸುವಷ್ಟು ಮುಂದುವರಿದಿದೆ. ಇನ್ನು ಮುಂದೆ ಒಂದೊಂದು ಕೂದಲಿಗೂ ಒಂದೊಂದು ಅರೆಯಂಥದ್ದನ್ನು ಕಂಪೆನಿಯವರು ತಂದು ಜನರಿಗೆ 'ನೈಸ್ ಶೇವ್' ಮಾಡ್ತಾರೋ ಎಂತದೋ! ಆ ಕಾಲದ ಬಗ್ಗೆ ಈಗ ವಿಮರ್ಶೆ ಬೇಡ. ನನಗೆ ಬೇಕಾಗಿದ್ದದ್ದು ಹಳೆ ಫ್ಯಾಷನ್ನಿನದ್ದು-ಶಾಲೆಯಲ್ಲಿ ಪೆನ್ಸಿಲ್ ಮೊನೆ ಮಾಡುವುದರ ಜೊತೆಗೆ ಬೆರಳಲ್ಲಿ ರಕ್ತ ಬರಿಸಿಕೊಳ್ಳಲೂ ಬಳಸುತ್ತಿದ್ದ ಟೋಪಾಝ್ ಮಾದರಿಯ ಬ್ಲೇಡು. ಊರಲ್ಲಾದರೆ ಅಪ್ಪ ಬಳಸಿ ತೆಗೆದಿಟ್ಟದ್ದು ಸುಮಾರು ಸಿಗ್ತಿತ್ತು. ಒಬ್ಬನೇ ಇರುವ ಈ ಮೈಸೂರಲ್ಲಿ ಯಾರನ್ನು ಕೇಳುವುದು? ಮೇಲಿನ ಮನೆಯ ಓನರ್ ಬಳಿ ಕೇಳಲು ನಾಚಿಕೆ ಆಯಿತು. ಕೊನೆಗೆ 'ಸೂಪರ್ ಮಾರ್ಕೆಟ್' ಎಂದು ಹಲಗೆ ಹಾಕಿರುವ ಪೆಟ್ಟಿಗೆ ಸೈಜಿನ ಅಂಗಡಿಗೆ ಹೋಗಿ ಒಂದು ಬ್ಲೇಡು ಕೊಡಿ ಅಂದೆ. ಅವ ಯಥಾಪ್ರಕಾರ ಅವಳಿ ಅರೆಯ ವಿಲ್‍ಮನುಷ್ಯನನ್ನೇ ಕೊಟ್ಟ. ಸಿಂಗಲ್ ಎಡ್ಜಿದ್ದು ಕೊಡಪ್ಪಾ ಅಂದದ್ದಕ್ಕೆ ಹಳೆಯ ಬ್ಲೇಡು ಅಂದರೆ ಹಳೆ ಮಾದರಿಯ ಟೋಪಾಝ್ ಬ್ಲೇಡು ಎದುರಿಗೆ ಬಂತು. ಆ ಒಂದು ಇಡೀ ಕಟ್ಟು ಬ್ಲೇಡು ಇಟ್ಟುಕೊಂಡು ಏನು ಮಾಡಲಿ ಎಂದನಿಸಿತಾದರೂ ಈ ರೀತಿ ತಲೆಕೆಟ್ಟ ಯೋಚನೆಗಳು ಬಂದಾಗ ಬೇಕಾಗ್ತವೆ ಎಂದು ಕೊಂಡುಕೊಂಡೆ.
ಆಯುಧದ ವ್ಯವಸ್ಥೆ ಆಯಿತು. ಇನ್ನೇನು? ಅಯ್ಯೋ, ಕೂದಲೇ ಸಿಗಲಿಲ್ಲ ಇನ್ನೂ. ತಲೆ ಮುಟ್ಟಿಕೊಂಡೆ. ಈ ಮಳೆಯಲ್ಲೂ ಸಮ್ಮರ್ ಕಟ್ ಮಾಡಿಕೊಂಡದ್ದಕ್ಕಾಗಿ ೧.೫ ಸೆಂಟಿಮೀಟರ್ ಉದ್ದವಿದ್ದ ಕೂದಲು ಶಾಸ್ತಿ ಮಾಡುವಂತೆ ನನ್ನನ್ನು ಅಣಗಿಸಿತು. ಅದಕ್ಕೆ ದಿನಂಪ್ರತಿ ಎಣ್ಣೆ ಬಳಿದುಕೊಳ್ಳುವುದರಿಂದ ಬ್ಲೇಡು ಸೀಳಬಹುದಾದಂಥ ಮೇಲ್ಮೈಲಕ್ಷಣ ಕೂಡ ಅದಕ್ಕಿರಲಿಲ್ಲ; ಆದ್ದರಿಂದ ಕಿತ್ತರೂ ಸುಖವಿಲ್ಲ. ಅದು ಬಿಡಿ, ಹಾಗೆ ಕೀಳಿಕೊಳ್ಳಲು ನಾನೇನು ಜೈನ ಮುನಿಯೆ? ಅವರಾದರೆ 'ಕೇಶೋಲ್ಲುಂಚನಂ ಪರಮಸುಖಮ್' ಎನ್ನುತ್ತಾ, ರಕ್ತ ಬರುತ್ತಿದ್ದರೂ ನಗುತ್ತಾ ಕಿತ್ತುಕೊಳ್ಳುತ್ತಾರೆ. ನಾನು ಜೈನಮುನಿಯಾಗಿ ಜನಿಸಿದಾಗ ನೋಡಿದ್ರಾಯಿತು, ಈಗ ಆ ಸಾಹಸ ಬೇಡ ಅಂದುಕೊಂಡೆ.
೨೦ ವರ್ಷ ಹಿಂದೆ ವಾಸವಿದ್ದ ಹಳ್ಳಿ ಮನೆ ಕಡೆ ಸ್ಮೃತಿ ಹೋಯಿತು. ಮೂರು ಹೆಂಗಸರು, ಮೂರು ಹುಡುಗಿಯರು ಇದ್ದ ಅವಿಭಕ್ತ ಕುಟುಂಬವಾದ್ದರಿಂದ ಮನೆಯ ಮೂಲೆಗಳೆಲ್ಲ 'ತಲೆಕಸ'ದ ಗುಪ್ಪೆಗೇ ಮೀಸಲಾಗಿದ್ವು. ಉಡುಪಿಯ ನಮ್ಮ ಮನೆಯಲ್ಲಿ ಪಟ್ಟಣ ಶೈಲಿಯ ಸ್ವಚ್ಛತೆಯಿಂದಾಗಿ ಅಷ್ಟು ಕೂದಲು ಸಿಗದಾದರೂ ಬಾಚಣಿಗೆ ಹುಡುಕಿದರೆ ಒಂದೆರಡಕ್ಕೆ ಮೋಸವಿಲ್ಲ. ಆದ್ರೆ ಈ ಬಿಡಾರದಲ್ಲಿ ಎಲ್ಲಿಂದ ತರಲಿ? ಮತ್ತೆ ಮೇಲಿನ ಮನೆಯ ಓನರ್ ನೆನಪು ಬಂತು! ಆದರೆ ಅವರದ್ದು ಬೊಕ್ಕತಲೆ. ಅರೆ, ಓನರ್-ಆಂಟಿ ಇದ್ದಾರಲ್ವ. "ಆಂಟೀ, ನಿಮ್ಮದೊಂದು ಉದ್ದ ಕೂದಲು ಕೊಡ್ತೀರಾ ಪ್ಲೀಸ್" - ಎಂಬ ಮಾತನ್ನು ಹೇಳುವುದು ಬಿಡಿ, ಎಣಿಸಿದಾಗಲೇ ಅಸಹ್ಯವಾಯಿತು, ಥೂ. ಇನ್ನು ಇದನ್ನು ಕೇಳಿದರೆ ಅವರಿಗೆಂಥ ಭಾವನೆ ಬಂದೀತು ನನ್ನ ಮೇಲೆ. ಒಳ್ಳೆ ಸುಭಗನೆಂದೆಣಿಸಿದ್ದಾರೆ ಇಷ್ಟು ದಿನ(ಹೌದೋ ಅಲ್ವೋ ಬೇರೆ ಮಾತು). ಅದನ್ನು ಕಳೆದುಕೊಂಡರೆ ಈ ಮೈಸೂರಲ್ಲಿ ಬಾಡಿಗೆಮನೆ ಹುಡುಕುವ ತಾಪತ್ರಯ ಬೇಡವೇ ಬೇಡ.
ಆಹ್, ಕ್ಷೌರದಂಗಡಿಗಿಂತ ಪ್ರಶಸ್ತ ಜಾಗ ಬೇಕೆ? ಅದೇ ಸರಿ. ಆದರೆ ಅಲ್ಲಿ ಗುಪ್ಪೆ ಗುಪ್ಪೆ ರಾಶಿ ಕೂದಲು. ನನಗೆ ಬೇಕಾದ್ದು ಒಂದೇ ಒಂದು ಉದ್ದದ,ದಪ್ಪದ ಕೂದಲು; ಅದನ್ನು ಹೇಗೆ ಕೇಳಲಿ. ಅಲ್ಲೆಲ್ಲಾ ಕತ್ತರಿಪ್ರಯೋಗಗೊಂಡ ಕೂದಲನ್ನು ಕೇಶಪ್ರಸಾಧನದವರು (ಕೂದಲಟೊಪ್ಪಿಯವರು ಅಂದ್ರೆ ಸಾಕಲ್ವಾ) ಧಂಡಿಯಾಗಿ ಕೊಳ್ಳುತ್ತಾರಂತೆ. ನನಗೂ ಆತ ಒಂದು ಕೆ.ಜಿ ಧಾರಣೆಯಲ್ಲಿ ಕೊಟ್ರೆ ಅದನ್ನೆಲ್ಲಿ ಸುರಿದುಕೊಳ್ಳಲಿ? ಸೋ ಆ ಯೋಚನೆ ಅಲ್ಲಿಗೇ ಬಿಟ್ಟೆ.
ನಂತರ ಆಫೀಸಿನ ಕಡೆ ಚಿಂತನೆಯನ್ನು ಹರಿಯಬಿಟ್ಟೆ. ನನ್ನ ಪ್ರಾಜೆಕ್ಟ್ ಟೀಮ್‍ನಲ್ಲಿ ಇಬ್ರು ಹುಡುಗಿಯರಿದ್ರು; ಇಬ್ರೂ ಕಾರಣಾಂತರಗಳಿಂದ ಟೀಮ್ ಬಿಟ್ಟು ಹೋದ ಮೇಲೆ ಈಗ ನಮ್ಮದು ಪ್ರಮೀಳರ ರಾಜ್ಯ (ಗಮನಿಸಿ: ಪ್ರಮೀಳೆಯರದ್ದಲ್ಲ); ಆ ಪ್ರಮೀಳರು ಯಾವಾಗ ಒಂದು ಜಡೆ ಬಂದೀತಪ್ಪಾ ಅಂತ ಕಾಯ್ತಿದ್ದಾರೆ (ನಾನು ಆಗಲೇ ಸುಭಗ ಅಂದ್ನಲ್ವಾ, ಸೋ ಹಾಗೆಲ್ಲ ಕಾಯಲ್ಲ). ಅಗೋಳ್ಳಿ, ಕ್ಯೂಬಿಕಲ್‍ಮೇಟ್ ಜಾಂಟಿ ನೆನಪಾದ (ಅವನ ಪೂರ್ತಿ ವಿವರ ಬೇಡ). ಅವನದೋ ಉದ್ದುದ್ದ, ದಪ್ಪನೆಯ "ನೀಳ ಕೇಶರಾಶಿ".
ಕೂಡಲೆ ಅವನನ್ನು ಅಪ್ರೋಚಿಸಿ, ದರಿದ್ರ ಮ್ಯಾನ್-ಗ್ಲಿಷ್‍ನಲ್ಲಿ ಕೇಳಿದೆ - 'ಮ್ಯಾನ್, ಐ ನೀಡ್ ಅ ಫೇವರ್. ಐ ಜಸ್ಟ್ ನೀಡ್ ಅ ಹೇರ್ ಆಫ್ ಯುವರ್ಸ್'.
ಹಾ ಮರೆತೆ, ಅವನೊಬ್ಬ 'ಫ'ಚ್ಚೆಹರುಕ. ಮಾತುಮಾತಿಗೂ ಆ ಪಾವನ ಶಬ್ದ ಬರದೆ ಒಂದು ವಾಕ್ಯವೂ ಪೂರ್ತಿ ಹೇಳಲಾಗದು ಅವನಿಂದ.
ಏನು ಘನಸಹಾಯವೆಂದುಕೊಂಡನೋ. ತುಂಬಾ ಆತ್ಮೀಯತೆಯಿಂದ ಕೇಳಿದ-'ಶ್ಯೂರ್ ಡ್ಯೂಡ್. ಬಟ್ ವೈ ದ ಫ್** ಯು ನೀಡ್ ದಟ್?'
ನನಗೆ ಒಮ್ಮೆಲೇ ಏನು ಹೇಳಬೇಕೆಂದು ತಿಳಿಯಲಿಲ್ಲ - 'ದಟ್ ಈಸ್ ಟು...ಟು... ಸೀಳ್ ದ ಕೂದ್ಲ್' ಅಂದುಬಿಟ್ಟೆ. ಕರ್ಮ! ಕೂಡಲೇ ಸಾವರಿಸಿಕೊಂಡು ಮುಂದುವರಿಸಿದೆ -
'ಯು ನೋ ಮ್ಯಾನ್, ವಿ ಹ್ಯಾವ್ ಎ ಸೇಯಿಂಗ್ ಇನ್ ಕನ್ನಡ (ಅವನು ಪುಣ್ಯಕ್ಕೆ 'ಹೌ ದ ಫ್** ಡು ಐ ನೋ ದಟ್' ಅನ್ಲಿಲ್ಲ). ’ಲೈಕ್ ದ ವೇ ಯು ...ಕ್ರ್ಯಾಕ್ ದ ಹೇರ್. ಐ ಜಸ್ಟ್ ವಾಂಟು ಎಕ್ಸ್‌ಪೀರಿಯೆನ್ಸ್ ದ್ಯಾಟ್' ಅಂದೆ.
ಅವನು ನನಗೆ ಯಾವ ಎಕ್ಸ್‌ಪೀರಿಯೆನ್ಸ್ ಬೇಕೆಂದು ಅಂದುಕೊಂಡನೋ ದೇವರಿಗೇ ಗೊತ್ತು. ಒಮ್ಮೆ ಗೊಂದಲದ ನೋಟದಿಂದ ನನ್ನನ್ನು ನೋಡಿ ಕೊನೆಗೆ ಉಸುರಿದ -’ಡೆಫಿನಿಟ್‍ಲಿ ಮ್ಯಾನ್, ಟೇಕ್ ಆಸ್ ಮೆನಿ ಫ್**ಇಂಗ್ ಹೇರ್ಸ್ ಆಸ್ ಯು ವಾಂಟ್' ಎಂದು ದಧೀಚಿ ಮಹರ್ಷಿಯಂತೆ ತ್ಯಾಗಮೂರ್ತಿಯ ಫೋಸು ಕೊಟ್ಟ. ಆತ ಅವನ ಕೂದಲಿನ ಬಗ್ಗೆಯೇ 'ಫ್**ಇಂಗ್ ಹೇರ್' ಅಂದಿದ್ದು ನನಗೆ ಗಲೀಜೆನಿಸಿತಾದರೂ ಅದನ್ನೆಲ್ಲ ತೋರ್ಪಡಿಸದೆ ಶಾಂಪೂ ಬಳಿದು ನಯವಾಗಿದ್ದ ಒಂದೆರಡು ಉದ್ದದ ಕೂದಲು ಕಿತ್ತು ಜೋಪಾನವಾಗಿ ಮನೆಗೆ ತಂದೆ.
ರೂಮಿಗೆ ಬಂದೊಡನೆ "ಸಾಹಸಕಿಶೋರವಿಜಯ" ಶುರು. ಒಂದು ಕೈಯ ಎರಡು ಬೆರಳುಗಳಲ್ಲಿ ಕೂದಲಿನ ತುದಿಗಳನ್ನು ಒತ್ತಿಹಿಡಿದು ಇನ್ನೊಂದು ಕೈಯಿಂದ ಬ್ಲೇಡನ್ನು ಅದರ ಮೇಲೆ ಹಾಯಿಸಿದೆ. ನೆಲದಲ್ಲಿ ಒಂದಷ್ಟು ಗೀರಾಯಿತೇ ಹೊರತು ಕೂದಲು ಹಾಗೆಯೇ ಮಿರಿಮಿರಿ ಮಿಂಚುತ್ತಿತ್ತು. ಮತ್ತೂ ಪ್ರಯತ್ನಿಸಿದೆ. ಕೂದಲು 'ನನ ನೆಮ್ಮದಿಗೆ ಭಂಗವಿಲ್ಲ' ಎಂಬಂತಿತ್ತು. ಅದಕ್ಕೆ ಸರಿಯಾದ ಫಿಕ್ಸ್ಚರ್ ಇಲ್ಲ ಎಂಬ ಯೋಚನೆ ಬಂತು ನನಗೆ. ಹೀಗಾಗಿ ಅದರ ಒಂದು ತುದಿಯನ್ನು ಸ್ಥಾವರವಾದ ಮರದ ಕಡ್ಡಿಯೊಂದಕ್ಕೆ ಕಟ್ಟಿ ಮತ್ತೊಮ್ಮೆ ಪ್ರಯತ್ನಿಸಿದೆ. ಯಥಾಪ್ರಕಾರ ಕೂದಲೆಲ್ಲೋ, ಬ್ಲೇಡ್ ಎಲ್ಲೋ, ಮೇರೆ ಮೀರುತ್ತಿದ್ದ ನನ್ನ ಸಹನೆಯೆಲ್ಲೋ! ಭೂತಕನ್ನಡಿ ಇದ್ದರೆ ಒಳ್ಳೆಯದಿತ್ತು ಅನಿಸಿತು. ಅದನ್ನೆಲ್ಲ ಹೊಂದಿಸುವಷ್ಟು ವ್ಯವಧಾನವಿರಲಿಲ್ಲ. ಅಂತೂ ಅರ್ಧ ಗಂಟೆ ಒದ್ದಾಡಿದ ನಂತರ ಪ್ರಯತ್ನ ಕೈ ಬಿಟ್ಟೆ. 'ಕೂದಲೆಂಬುದು ಒಂದು ದಪ್ಪ ದಾರದಷ್ಟಾದರೂ ಅಗಲವಿದ್ದರೆ ಮಾತ್ರ ಈ ಪ್ರಯತ್ನಕ್ಕೆ ಅರ್ಥವಿದೆ' ಎಂಬ ಲರ್ನಿಂಗ್‍ನೊಡನೆ ಪ್ರಾಜೆಕ್ಟ್ ಕ್ಲೋಷರ್ ರಿಪೋರ್ಟ್ ತಯಾರಾಗಿತ್ತು.
ಸುಸ್ತಾಗಿ ನಿಟ್ಟುಸಿರು ಬಿಡುವಾಗ 'ಈ ಕೆಲಸವೇ ಕೂದಲುದುರಿಸುವಷ್ಟು ತಲೆನೋವಿದ್ದಾದರೆ ಇನ್ನು ನಿಜವಾದ ವಿಮರ್ಶೆ ಮಾಡಲು ಎಷ್ಟು ಸಲ ತಲೆ ಬೋಳಿಸಿಕೊಳ್ಳಬೇಕೋ' ಎಂಬ ಯೋಚನೆ ತಲೆಯಲ್ಲಿ ಸುಳಿದಾಡುತ್ತಿತ್ತು. ಬ್ಲೇಡುಗಳನ್ನು ಜೋಪಾನವಾಗಿ ಎತ್ತಿಟ್ಟು, ಅವನ "ಫ್..ಇಂಗ್" ಕೂದಲುಗಳನ್ನು ಎಸೆದು ಬರುವಾಗ ಕೂದಲಿನ ಬಗ್ಗೆ ಕೈಲಾಸಂ ಜೋಕೊಂದು ಹಾಗೆಯೇ ನೆನಪಾಯಿತು. ಕೇಶವರಾಯರು ಸಂಪಾದಿಸಿದ 'ಕೈಲಾಸಂ ಜೋಕ್ಸು ಸಾಂಗ್ಸೂ' ಕೃತಿಯಲ್ಲಿದೆ ಅದು. ಹೋಟೆಲಲ್ಲಿ ಉಪ್ಪಿಟ್ಟು ತಿನ್ನುತ್ತಿದ್ದ ಕೈಲಾಸಂಗೆ ಅದರಲ್ಲಿ ಕೂದಲು ಸಿಕ್ಕಿತು. ಮಾಣಿಯನ್ನು ಕರೆದು ತೋರಿಸಿ ಕೇಳಿದರು 'ಇದೇನು ಮಗೂ?' ಅಂತ. ಮಾಣಿ ಅಂದ - 'ಕೂದಲು ಸಾರ್'. ಅವರು 'ಅದು ನನ್ಗೂ ಗೊತ್ತು ರಾಜಾ, ಒಳಗೆ ಭಟ್ರನ್ನು ಕೇಳು ಯಾರದ್ದೂಂತ' ಅಂದ್ರು. 'ಆಯ್ತು' ಎಂದು ಕೂದಲು ಹಿಡಿದು ಹೋಗುತ್ತಿದ್ದ ಮಾಣಿಯನ್ನು ಮತ್ತೆ ಕರೆಸಿ 'ಹಾಗೆಯೆ ಎಲ್ಲಿಯದ್ದು ಅಂತಲೂ ಕೇಳ್ಕೊಂಡು ಬಾ ಬೇಗ' ಅಂದ್ರಂತೆ!
ಭರತವಾಕ್ಯ - ಈಚೀಚೆಗೆ 'ಚಾಪೆ ಕೆಳಗೆ ರಂಗೋಲಿ ತೂರುವುದು' ಅನ್ನುವ ನುಡಿಗಟ್ಟು ತಲೆ ತಿನ್ನುತ್ತಾ ಉಂಟು. ಏನು ಕಾದಿದೆಯೋ!!

Wednesday, May 30, 2007
ಷಡ್ರಸೋಪೇತ ಭೋಜನ-೨
[.....ಹಿಂದಿನ ಸಂಚಿಕೆಯಲ್ಲಿ ಬಡಿಸಿದ ಅರ್ಧಂಬರ್ಧ ಊಟ ಉಂಡಾದ್ರೆ ಮಾತ್ರ ಇಲ್ಲಿ ಮುಂದುವರೆಸಿ]
೪. ಹುಳಿ - ಈ ಶಬ್ದದಲ್ಲೇ ಒಂದು ಸುಖ ಉಂಟು. ಅದೇ ಸವಿಸವಿ ನೆನಪು, ಸಾವಿರ ನೆನಪುಗಳನ್ನು ತರಿಸುವಂಥದ್ದು. ಒಂದನೇ ಕ್ಲಾಸಿನಲ್ಲಿ ಹುಳಿದ್ರಾಕ್ಷಿ ಎಂದು ಜರಿದ ನರಿಯನ್ನು ಗೇಲಿ ಮಾಡಿದ್ದರಿಂದ ಹಿಡಿದು ದಾರಿಯುದ್ದಕ್ಕೂ ಕಲ್ಲೆಸೆದು ಹುಳಿಮಾವು ತಿಂದುಕೊಂಡು ಮನೆಗೆ ಬಂದದ್ದು, ಪುಳ್ಕೊಟ್ಟೆ(ಹುಣಿಸೆಹಣ್ಣಿನ ಬೀಜ)ಯನ್ನು ಹೊಟ್ಟೆನೋವಾಗುವಷ್ಟು ತಿಂದದ್ದು, ಜಾಂಬುಹಣ್ಣು ತಿಂದು ಬಾಯಿಯೆಲ್ಲಾ ನೇರಳೆ ಮಾಡಿಕೊಂಡದ್ದು, ಪೆನ್ಸಿಲ್ಲು-ರಬ್ಬರು-ಅಡಿಕೋಲು ಕೊಡದ ಕಂಜೂಸಿಗೆ ’ಪುಳ್ಚಟ್ಟೆ’ ಅಂತ ಮೂದಲಿಸಿದ್ದು, ಬುಗುರಿ, ನೆಲ್ಲಿ, ಹುಳಿತೇಗು ಬರಿಸುವ ಗೋಳಿಸೋಡ - ಅಬ್ಬಬ್ಬಾ, ಮುಗಿಯದ ಪಟ್ಟಿ. ಆದರೆ ಮನೆಯಲ್ಲಿ ಮಾತ್ರ ’ಸ್ವಲ್ಪ ಮಜ್ಜಿಗೆ ಹಾಯಿಕೊಮ್ಮಾ’ ಅಂದರೆ ಪ್ರಾಣಸಂಕಟ. ’ಆ ! "ಹುಳಿ ಜಮ" ಅದು; ನಂಗೆ ಬೇಡ’ ಅಂತ ರಾಗ ಎಳಿಲಿಕ್ಕೊಂದು ಗೊತ್ತಿತ್ತು. ಏನಿದು ’ಜಮ’ ಅಂದ್ರೆ? ಮತ್ತೆ ನನ್ನ ಊಹಾಶಕ್ತಿಯನ್ನು ನಂಬುದಿದ್ರೆ ತಂಪು ಐಸ್‍ಕ್ರೀಮ್, ಹುಳಿಮೊಸರು-ಇವನ್ನೆಲ್ಲ ತಿಂದ್ರೆ ಕೆಲವರಿಗೆ ಹಲ್ಲು ’ಜುಂ’ ಅನ್ನುತ್ತದೆ(ಹಲ್ಲು ಕೊಳಚುವುದು). ಹುಳಿ/ತಂಪಿನ ಪ್ರಭಾವ ಇರುವವರೆಗೆ ’ಜಂಜಂಜಂ’ ಅಂತ ಹೊಡೆದುಕೊಳ್ಳುವುದರಿಂದ ಹುಳಿಗೆ ’ಜಮ’ ಎಂಬ ಸಂಗಾತಿ ಸೇರಿರಬಹುದು. (ಸವಿ ಸವಿ ನೆನಪು ಅಂತೆ - ಟೀಚರ್ ನಾಗರಬೆತ್ತ ಪುಡಿಮಾಡಿದ್ದನ್ನು ಯಾಕೆ ಹೇಳುದಿಲ್ಲ ಇಲ್ಲಿ?)
ತಂಪಿನ ಸೂಪರ್‌ಲೇಟಿವ್ ಡಿಗ್ರಿಯನ್ನೂ ಹಾಗೆಯೇ ಗಮನಿಸಿಬಿಡುವ. ಬೆಳಿಗ್ಗೆ ಬೇಯಿಸಿಟ್ಟ ಗಂಜಿಯನ್ನು ರಾತ್ರಿ ಕೆಲಸ ಮುಗಿಸಿ ಬಂದಮೇಲೆ ತಿನ್ನಬೇಕಾದ್ರೆ ಒಮ್ಮೆ ಬಿಸಿಮಾಡಿಕೊಳ್ಳಬೇಕು. ಇಲ್ದಿದ್ರೆ "ಚಪ್ಪೆ ಚೌಳಿ" ಆಗಿರ್ತದೆ. ಈ ಚಪ್ಪೆ ಅನ್ನುವುದು ತುಳು/ಕರಾವಳಿಕನ್ನಡದಲ್ಲಿ ತಂಪು ಎಂಬರ್ಥದಲ್ಲಿ ಬಳಸಲ್ಪಡುವ ಶಬ್ದ. ಕನ್ನಡದಲ್ಲಿ "ಸಪ್ಪೆ" ಎಂಬ ಸಮರೂಪಿ ಶಬ್ದವು ’ರುಚಿಹೀನ’ ಎಂಬರ್ಥದಲ್ಲಿ ಪ್ರಯೋಗವಾಗುತ್ತದೆ. ಆದರೆ ಈ "ಚೌಳಿ" ಅಂದ್ರೆ ಏನು ಅಂತ ಯಾರನ್ನು ಕೇಳಿದ್ರೂ ಗೊತ್ತಾಗ್ಲಿಲ್ಲ ನನಗೆ. ನಿಮಗೆ ಗೊತ್ತಾದ್ರೆ ತಿಳಿಸಿಬಿಡಿ. (ನಿನ್ನ ಹತ್ರ ಫ್ರಿಜ್ ಇಲ್ಲ ಸದ್ಯಕ್ಕೆ; ಇದ್ದಿದ್ರೆ ೨-೩ ದಿನಕ್ಕಾಗುವಷ್ಟು ಗಂಜಿಯನ್ನು ಒಂದೇ ಸಲ ಬೇಯಿಸ್ತಿದ್ದಿಯಾ ಏನಾ, ಸೋಮಾರಿ)
೫. ಮೇಲೆ ಹೇಳಿದ ಯಾವ ವಿಪರೀತವಾದ್ರೂ ಆಗಬಹುದು; ಆದರೆ ಅಡಿಗೆಯ ಯಾವ ಪದಾರ್ಥವಾದರೂ "ಉಪ್ಪು ಶಿಂಗಿ"ಯಾದರೆ ಮಾತ್ರ ಅದನ್ನು ಸಹಿಸಲಿಕ್ಕೇ ಸಾಧ್ಯ ಇಲ್ಲ. ’ಶೀಽಽ’(ಛೀ) ಅನ್ನುವುದರ ನಾಸಿಕೋಕ್ತ ರೂಪವೇ ಶಿಂಗಿ ಎಂದಿರಬಹುದೋ ಅಂತ ಯೋಚನೆ ನನ್ನದು. (ಆವತ್ತು ಗಂಜಿಗೆ ಉಪ್ಪು ಅಂತ ಎಣಿಸಿಕೊಂಡು ಸಕ್ರೆ ಹಾಕಿದ ಸುದ್ದಿ ಹೇಳಿಬಿಡು ಪುಟ್ಟಾ!)
ಒಂದು ವಿಷಯ ಗಮನಿಸಿ; ಈ ರೀತಿ ಮೂಗಿನಲ್ಲಿ ಯಾಕೆ ಶಬ್ದ ಬರುತ್ತವೆ? ಮುಖ ಸಿಂಡರಿಸಿ ಮಾತಾಡಿ, ಆಗ ತಿಳಿಯುತ್ತದೆ. ಯಾವುದೇ ರುಚಿ ಅತಿಯಾದರೆ ಅದರ ತಿರಸ್ಕಾರ ರೂಪವಾಗಿ ಮುಖ ’ಸಿಂಡರೆಲ್ಲ’ ಆಗುವುದು ಅಲ್ವಾ? ಮುಖದ ಸ್ನಾಯುಗಳು ಬಿಗಿಗೊಳ್ಳುವ ಈ ಪ್ರಕ್ರಿಯೆಗೆ ಆ ತಿರಸ್ಕಾರ/ಅಸಹ್ಯವೇ ಕಾರಣ. (ನಾವು ಕೇಳಿದ್ವಾ ನಿನ್ಹತ್ರ ಇದನ್ನು?)
೬. ಇನ್ನು ಕೊನೆಯದಾದ ಒಗರು/ಚೊಗರು. ಇದು ವಿರಳವಾದ ರುಚಿಯಾದ್ದರಿಂದ ಇದರ ಉತ್ಪ್ರೇಕ್ಷಾರೂಪಗಳೂ ನನಗೆ ತಿಳಿದಿಲ್ಲ. ಒಗರು ರುಚಿಗೆ ’ಕಸದ ಹಾಗೆ ಉಂಟು’ , ’ಮಣ್ಣು ತಿಂದಾಗೆ ಆಗ್ತದೆ’ ಎಂಬ ಅಸಹನೆಯ ಮಾತುಗಳನ್ನು ಮಾತ್ರ ಕೇಳಿದ್ದೇನೆ. ನಿಮಗೇನಾದ್ರೂ ಹೆಚ್ಚಿನ ವಿವರ ಗೊತ್ತಿದ್ರೆ ದಯಮಾಡಿ....ತಿಳಿಸಿ. (ಆಯಿತು ಮಾರಾಯಾ ತಿಳಿಸ್ತೇವೆ...ಮುಗೀತಾ ಅಥವಾ ಇನ್ನೂ ಉಂಟಾ?)
ಇನ್ನೊಂದೇ ಒಂದು ಸಂಶಯ. ಆರು ರಸಗಳು ಅಂತ ಮೊದಲೇ ಹೇಳಿದ್ದಾಗಿದೆ. ಆದರೆ ಹಾಲು, ತುಪ್ಪ, ಎಣ್ಣೆ, ಬೆಣ್ಣೆ (ಇವು ಹಾಳಾಗದಿದ್ದಲ್ಲಿ), ಹೆಸರು-ರಾಗಿ ಮುಂತಾದ ಧಾನ್ಯ/ಬೇಳೆಕಾಳುಗಳು, ಜೀರಿಗೆ-ಎಳ್ಳು-ಸಾಸಿವೆ ಮುಂತಾದ ಸಂಬಾರಪದಾರ್ಥಗಳು ಇವೆಲ್ಲ ಈ ಆರರಲ್ಲಿ ಯಾವುದರಲ್ಲಿ ಬರ್ತಾವೆ? ಇದಮಿತ್ಥಂ ಅಂತ ಹೇಳಬಹುದಾದ ಯಾವ ರುಚಿಯೂ ಇವುಗಳದ್ದು ಅಲ್ಲ ಅಲ್ವಾ, ಆದ್ದರಿಂದ ಕುತೂಹಲ ನನಗೆ. ಇನ್ನು ನಿಮ್ಮೂರಲ್ಲಿನ ರುಚಿಕಟ್ಟಾದ ಉತ್ಪ್ರೇಕ್ಷೆಗಳನ್ನೂ ಹಂಚಿಕೊಳ್ಳಿ. (ಅದೇನು ಎಳ್ಳು-ಬೆಲ್ಲವಾ ಹಂಚಿಕೊಳ್ಳಲಿಕ್ಕೆ? ಸರಿ ಆದಷ್ಟು ಬರೀತೇವೆ. ಇನ್ನೇನಾದ್ರೂ?).
*********************************************************************************
ಇನ್ನು ಬೇರೊಂದು ಹೊಸ ವಿಷಯ, ಸಾಮಗ್ರಿಗಳು ದೊರಕುವವರೆಗೆ ಅವರಿವರ ಬಾಗಿಲುಗಳನ್ನು -ಬ್ಲಾಗ್‍ಗೆ ಬಾಗಿಲು ಅನ್ನೋಣವೇ? - ಎಡತಾಕುತ್ತಿರುತ್ತೇನೆ. ["ಎಂದು ಹೇಳಿ ನನ್ನ ಎರಡು ಮಾತುಗಳನ್ನು ಮುಗಿಸುತ್ತೇನೆ" ಅನ್ನಬೇಕಿತ್ತು! ಹೂಂ, ಬೇರೆ ಬ್ಲಾಗ್ ನೋಡಿಯಾದ್ರೂ ಕಲಿ ಹೇಗೆ ಬರಿಯುದು ಅಂತ. ಮುಗೀತಲ್ವಾ ನಿನ್ನ ರಗಳೆ, ಹೊರಡ್ತೇವೆ ಇನ್ನು, ನಮಸ್ಕಾರ! ;-) ]

ಷಡ್ರಸೋಪೇತ ಭೋಜನ-೧
ನಮ್‍ಸ್ಕಾರ.
ಸುಮಾರು ದಿನ ಆಗಿತ್ತು ಬರೀದೆ. ವಿಷಯಗಳು ಒಂದಷ್ಟು ತಲೆಗೆ ಬರ್ತಿತ್ತಾದ್ರೂ ಆಚೆ, ಈಚೆ ಹೋಗುವಷ್ಟರಲ್ಲಿ ಅವೂ ತಲೆಯ ಆಚಿಂದ್ಲೂ, ಈಚಿಂದ್ಲೂ ಹೊರಗೆ ಹೋಗ್ತಿದ್ವು. ಆದ್ರೂ ಈ ಸಲ ಸ್ವಲ್ಪ ಮನಸ್ಸಾದ್ರಿಂದ್ಲೂ, ಪುರ್ಸೊತ್ತಾದ್ರಿಂದ್ಲೂ ಅದ್ರೊಟ್ಟಿಗೆ ಲಾಯಿಕಿದ್ದೊಂದು ವಿಷಯ ಸಿಕ್ಕಿದ್ರಿಂದ್ಲೂ ಕೀಲಿ ಕುಟ್ಟಲಿಕ್ಕೆ ಸುರು ಮಾಡಿದೇನೆ. ಹಾ! ಈ ಸಲ ಪುನಃ ಶಬ್ದಗಳನ್ನೇ ಹಿಡ್ಕೊಂಡು ನನ್ನ ಪದಪುಂಜಗಳನ್ನು ಸುರಿಸ್ತೇನೆ, ಓದಿ ಆನಂದಿಸಿ. (ಆಯಿತಾ ಪೀಠಿಕೆ? ಸರಿ. ಇನ್ನು ನಿನ್ನ ಪಾಂಡಿತ್ಯ ಪ್ರದರ್ಶನ ಶುರು ಮಾಡು; ಸಹಿಸಿಕೊಳ್ತೇವೆ)
ತಿನ್ನುವುದರ ಕಡೆಗೆ ಈ ಸಲ ಗಮನ ಹರಿಸೋಣ (ಅದು ಬಿಟ್ರೆ ಬೇರೆ ಎಂತಾದ್ರೂ ಕೆಲಸ ಮಾಡಿದ್ದುಂಟಾ ನೀನು?).
ಸಿಹಿ-ಕಹಿ-ಕಾರ(ಖಾರ)-ಹುಳಿ-ಉಪ್ಪು-ಒಗರು(ಚೊಗರು), ಇವಿಷ್ಟು ಊಟದಲ್ಲಿನ ಷಡ್ರಸಗಳು (ಏನದು, ಮದ್ರಸವಾ!) ಅಂತ ಸಣ್ಣಂದಿನಿಂದಲೂ ಕಲಿತಿದ್ದೇವೆ (ಓಹೋ ಹೌದಾ!). ಈ ರುಚ್ಯರ್ಥಕ (ಆಂ! ಕನ್ನಡ ಪ್ಲೀಸ್) ಪದಗಳು ಕರ್ನಾಟಕದಲ್ಲೆಡೆ ಬಹುತೇಕ ಒಂದೇ ಆಗಿವೆ (ನಿಂಗೆ ಹೇಗೆ ಗೊತ್ತು? ಬೆಂಗಳೂರಿಗೆ ಹೋಗಿ ಬಂದು ಮತ್ತೆ ಈ ಮಾತು ಹೇಳು). ಆದರೆ ಇವುಗಳ ಉತ್ಪ್ರೇಕ್ಷಿತರೂಪಗಳು (ಅಗೈನ್, ಕನ್ನಡ ವೋನ್ಲಿ...) ಮಾತ್ರ ಒಂದೊಂದು ಕಡೆ ಒಂದೊಂದು ಥರ ಇರಬಹುದು (ಇರಬಹುದು ಅಂದೆಯಾ, ಪುಣ್ಯ). ತಿನಿಸುಗಳ ತವರಾದ ನನ್ನೂರಿನವರು ಏನಂತಾರೆ ನೋಡುವ. (ಏನಂದೆ, ತವರಾ? ಉಡುಪಿಯವರು ಬಿಟ್ರೆ ಬೇರೆ ಯಾರೂ ಊಟವೇ ಮಾಡಲಿಲ್ಲ ಅಂತಲಾ ನಿನ್ನ ಅಂದಾಜು?...ಆಗ್ಲಿ ಮುಂದುವರೆಸು, ಇಷ್ಟು ಪೀಠಿಕೆಯ ನಂತರವೂ ನಮಗೆ ನಿನ್ನ ಲೇಖನದ ವಿಷಯ ಇನ್ನೂ ಗೊತ್ತಾಗ್ಲಿಲ್ಲ!)
*********************************************************************************
೧. ಹೋಟ್ಲಲ್ಲಿ ಕಾಪಿ ತರಿಸ್ತೀರಿ. ಅವ ಕೊಡುವ ಲೋಟ - ಅದು ಬಾಟ್ಲಿಯ ಮುಚ್ಚಳದಷ್ಟೂ ದೊಡ್ಡದಿರುವುದಿಲ್ಲ - ಅದರ ಕಂಠಪೂರ್ತಿ ತುಂಬಿಸಿದ "ನೀರ್ಪಟ್ಟು" ಕಾಪಿಗೆ ೨ ಚಮಚ ಸಕ್ರೆ ಹಾಕಿರ್ತಾನೆ. ಕುಡಿದ ಕೂಡ್ಲೆ ಬರುವ ಮಾತು -"ಥೂ. ಸೀಽಽಕಂಟು. ಕಾಪಿ ಕೊಡು ಅಂದ್ರೆ ಪಾಯಸ ಕೊಟ್ನಾ ಎಂಥ ಕರ್ಮವಾ ಗೊತ್ತಿಲ್ಲ". ಈ ಸೀಽಽಕಂಟ್ - ಇಲ್ಲಿ ಸೀಽಽಂ ಇದನ್ನು ಮೂಗಿನಲ್ಲಿ ಉಚ್ಚರಿಸಬೇಕು. ಇನ್ನುಳಿದ ’ಕಂಟ್’ ಅಂದ್ರೆ ಏನು? [ಮೋಟುಗೋಡೆಯ ಮೇಸ್ತ್ರಿಗಳು ಓದುತ್ತಿದ್ದರೆ ಅಪಾರ್ಥ ಮಾಡಿಕೊಳ್ಬೇಡಿ ಆಯಿತಾ :-) ]. ಸಿಹಿ ಹೆಚ್ಚಾದರೆ ಬಾಯಿ ಕಟ್ಟಿದಂತಾಗುವುದರಿಂದ ಸಿಹಿಕಟ್ಟು ಎಂದು ಬಂದಿರಬಹುದು. ಈ ಸಿಹಿಕಟ್ಟು, ರುಚಿಕಟ್ಟು ಇತ್ಯಾದಿ ಶಬ್ದಗಳಲ್ಲಿನ ’ಕಟ್ಟು’ ಇದನ್ನೂ ’ಸಿಹಿ’ಯಂತೆ ನಾಸಿಕಾಗ್ರದಲ್ಲಿ ಉಚ್ಚರಿಸಿದಾಗ ’ಕಂಟ್’ ಎಂದಾಗುತ್ತದೆ. [ನಾಸಿಕ, ಆಗ್ರಾ, ಬನಾರಸ್ ಇದೆಲ್ಲ ಎಂತ ಮಾರಾಯಾ? ದಮ್ಮಯ್ಯ ಕನ್ನಡದಲ್ಲಿ ಹೇಳು]
೨. ಹಾಗಲಕಾಯಿಯ ಪಲ್ಯವೋ ಅಥವಾ ಅದನ್ನು ಅರೆದು ಒಗ್ಗರಣೆ ಹಾಕಿದ ಉಪ್ಪಿನಕಾಯಿಯೋ ಭಾರೀ ರುಚಿ ಇರ್ತದೆ, ಹೌದು. ಆದರೆ ಅದನ್ನು ಹಸೀ ತಿನ್ನಿ ನೋಡುವ. ಅಷ್ಟು ಖಯಾಲಿ ಇಲ್ಲದವರಾದ್ರೆ "ಕಹಿ ವಿಷ" (ಕೈಂಽಽವಿಷ) ಅಂತ ಮುಖ ಕಿವುಚುವುದು ಗ್ಯಾರಂಟಿ. ಬೆಳೆದು/ಬಲಿತು ಹೋದ ಮುಳ್ಳುಸೌತೆಯನ್ನು (ಕರಾವಳಿಯ ಮುಳ್ಳುಸೌತೆ = ಬಯಲುಸೀಮೆಯ ಸೌತೆ; ಕರಾವಳಿಯ ಸೌತೆ = ಬಯಲುಸೀಮೆಯ ಮಂಗಳೂರು ಸೌತೆ) ಕೋಸುಂಬರಿಗೆ ಹಾಕಿದ್ರಂತೂ ಅಸಾಧ್ಯ ಕಹಿ. ಎರಡು ಕಾರಣ ಅದಕ್ಕೆ - ಒಂದು ಅದರ ಸ್ವಂತ ಕಹಿ; ಎರಡನೆಯದ್ದು ಕೋಸಂಬ್ರಿ ತಿನ್ಲಿಕ್ಕಿಲ್ಲ ಅಲ್ವಾ ಅಂತ ಬೇಸರದ ಕಹಿ. ಸರಿ, ಕಹಿಯ ಉತ್ಪ್ರೇಕ್ಷಕವು ವಿಷ ಅಂತ ತಿಳಿದೆವು. ಆದರೆ ನನಗೊಂದು ಸಂದೇಹ-’ಕಹಿಯು ವಿಷದಂತಿರುತ್ತದೆ’ ಅನ್ನುವ ವಿಷಯವನ್ನು ವಿಷ ತಗೊಂಡವನೇ ಹೇಳಿದ್ನಾ? ಇಲ್ಲದಿದ್ರೆ ಹೇಗೆ ಗೊತ್ತಾಗ್ಲಿಕ್ಕೆ ಸಾಧ್ಯ? :-) ಹೀಗಿರಬಹುದು- ಕಹಿ ಎನ್ನುವುದು ತುಂಬಾ ಹಿಂಸಿಸುವ ರುಚಿಯಾದ್ದರಿಂದ ಆ ನುಡಿಗಟ್ಟು ಬಂದಿರಬೇಕು. ಕಹಿಗೆ ಇನ್ನೂ ಹೋಲಿಕೆಗಳಿವೆ - ಕಾಫಿ ವಿಪರೀತ ಸ್ಟ್ರಾಂಗ್ ಆದ್ರೆ ’ಇದೆಂತ ಕಷಾಯವಾ’ ಅಥವಾ ’ಮದ್ದಿನ ಹಾಗೆ ಉಂಟು’ ಎಂಬಿತ್ಯಾದಿ ಉದ್ಗಾರಗಳು ಆಯುರ್ವೇದ ಔಷಧಿಗಳ ಸ್ವಾದಿಷ್ಟತೆಯನ್ನು ಸೂಚಿಸುತ್ತವೆ. (ನಿನ್ನ ಭಾಷಣ ಏನು ಭಾರೀ ಸಿಹಿ ಇರ್ತದೆ ಅಂತ ಮಾಡಿದ್ಯಾ? ಅದೂ ಕಹಿ ವಿಷವೆ).
೩. ಒಂದು ಸಲ ಹೀಗಾಯಿತು. ಉದ್ಯೋಗಾರ್ಥ ಪುಣೆಗೆ ನಾನು ಕಾಲಿಟ್ಟ ಮೊದಲ ದಿನಗಳವು. ನಂಬ್ತೀರೋ ಇಲ್ವೋ, ಮಣಿಪಾಲದಂಥ ಮಣಿಪಾಲದಲ್ಲಿ ಕಲಿತೂ ಒಂದು ದಿನವೂ ಗೆಳೆಯರ ಜೊತೆ ರಾತ್ರಿ ಊಟ ಅಂತೆಲ್ಲ ಹೋಗಿರ್ಲಿಲ್ಲ. ಮನೆ ಆಯಿತು, ಕಾಲೇಜ್ ಆಯಿತು ಅಂತ ಇದ್ದವ. ಹೆಚ್ಚೆಂದರೆ ತಾಲೂಕಾಪೀಸಿನ ರಸಗಂಗದಲ್ಲೋ, ರಥಬೀದಿಯ ಮಿತ್ರಸಮಾಜದಲ್ಲೋ ಆತ್ಮೀಯ ಮಿತ್ರರ ಜೊತೆಗೆ ಅಪರೂಪಕ್ಕೊಮ್ಮೆ ತಿನ್ನುತ್ತಿದ್ದ ಮಸಾಲೆದೋಸೆಯೇ ಅತ್ಯಂತ ಸಂಭ್ರಮದ ಸಂಗತಿಯಾಗಿತ್ತು. ಈ ಪುಣೆಯಲ್ಲಿ ಉಡುಪಿ ಹೋಟೆಲೊಂದಕ್ಕೆ ಹಲವು ಹೊಸ ಸ್ನೇಹಿತರೊಡನೆ ರಾತ್ರಿ ಅಶನಾರ್ಥ ಹೋದೆವು. ಅವರು ಊಟದ ಕ್ರಮ ಅರಿತವರಾದ್ದರಿಂದ(ನಾವೇನು ಮಣ್ಣಿ ತಿನ್ನುವವರಾ?) ಮೊದಲು ಎಲ್ಲರಿಗೂ ಸೂಪುಗಳನ್ನು ಆರ್ಡರಿಸಿದರು; FY(kind)I ನಾನು ಸೂಪು ಸೇವಿಪುದು ಅದೇ ಮೊದಲು - ಕಂದುಬಣ್ಣದ್ದೊಂದು ಮಂಚೂರಿಯೋ ಎಂಥದೋ ಒಂದು ನನ್ನ ಪಾಲಿಗೆ ಬಂತು. ನೋಡಲಿಕ್ಕೆ ಹುಗ್ಗಿಗೆ ನಂಜಿಕೊಳ್ಳಲು ಮಾಡುವ ಹುಳಿಗೊಜ್ಜಿನಂತಿತ್ತು ಅದು. ಅದನ್ನೇ ನೆನೆಸಿಕೊಂಡು ಒಂದು ಚಮಚದಷ್ಟು ತೆಗೆದು ಬಾಯಿಗಿಟ್ಟು ನುಂಗಿದೆ. ಅಷ್ಟೆ! ಜೀವ ಹೋದಂತಾಯಿತು. ಕೆಳದವಡೆಯಿಡೀ ನಡುಕ, ನಾಲಗೆಯಿಂದ ಹೊಟ್ಟೆಯ ತನಕ ಸಂಕಟ, ಕಣ್ಣಲ್ಲೆಲ್ಲಾ ಬುಳುಬುಳು, ಅತ್ಯಂತ ಅಸಹಾಯಕ ಸ್ಥಿತಿ ನನ್ನದು. ವಿಷಯ ಇಷ್ಟೆ - ಆ ಸೂಪ್ "ಕೊದಿಪೆಲ್ ಬಿಸಿ"ಯಾಗಿದ್ದು "ಉರಿ-ಖ್ಖಾರ"ದಿಂದ ಕೂಡಿತ್ತು. ತುಳುವಿನಲ್ಲಿ ’ಕೊದಿಪೆಲ್,ಕುದಿಪೆಲ್’ ಅಂದರೆ ಕುದಿಯುವ ಎಂದಾಗುತ್ತದೆ. ಇನ್ನು "ಉರಿ-ಖ್ಖಾರ" ಎಂಬಲ್ಲಿರುವ "ಖ" ಅಡಿವೊತ್ತೇ ಖಾರದ ಬೀಭತ್ಸತೆಯನ್ನು ಬಿಂಬಿಸುತ್ತದೆ ಅಲ್ವಾ? ತಡೀರಿ, ಪೂನಾದ ಕಥೆ ಪೂರ ಹೇಳಿಬಿಡ್ತೇನೆ. ಆ ರುಚಿಹೀನ ಸೂಪನ್ನು ಹುಳಿಗೊಜ್ಜಿನ ಅಮೃತತುಲ್ಯ ಸ್ವಾದದೊಡನೆ ಹೋಲಿಸುತ್ತಾ ಅರ್ಧಗಂಟೆ ಹೇಗೋ ಮಾಡಿ ತಿಂದೆ. ಕೊನೆಗೆ ಬರೀ ಒಂದು ಪ್ಲೇನ್ ದೋಸೆ ತಿನ್ನುವಲ್ಲಿಗೆ ನನ್ನ ಊಟ ಮುಗೀತು. ರಾತ್ರಿ ಊಟಕ್ಕೆ ಪ್ಲೇನ್ ದೋಸೆ, ಹ್ಯಾಗಿದೆ? (ನೀನು ಹುಗ್ಗಿ, ಗೊಜ್ಜು ಇದೇ ಎಲ್ಲ ತಿನ್ಲಿಕ್ಕಾದವ. ಆದರೆ ಈಗ ಹೋಟ್ಲಿಗೆ ಹೋದಾಗೆಲ್ಲ ಸೂಪ್ ಆರ್ಡರ್ ನೀನೇ ಮಾಡ್ತಿ ಅಲ್ವಾ, ಆಗ ಈ ಘಟನೆ ನೆನಪಾಗುದುಂಟಾ?)
"ಕಾರಕಟ್ಟಗೆ ಆಗಿದೆ" ಅನ್ನುವ ಬಳಕೆಯೂ ಒಂದುಂಟು. ಈ ಕಟ್ಟಗೆ ಎಲ್ಲಿಯದು ತಿಳಿದಿಲ್ಲ ನನಗೆ. ಇದಕ್ಕೆ ವಿರುದ್ಧವಾಗಿ ಸಾರಿನ ಪುಡಿ, ಕಾರ ಎಲ್ಲ ಹಾಕದೇ ಮಾಡುವ ಬೇಳೆಸಾರಿಗೆ ’ಕಟ್ಟುಸಾರು’ ಅಂತಾರೆ. ಈ ’ಕಟ್ಟು’ಗಳೆರಡು ಒಂದಕ್ಕೊಂದು ವಿರೋಧಾಭಾಸಾವಾಗಿವೆ ಅಲ್ವಾ? ಇವುಗಳ ಬಗ್ಗೆ ಊರಕಡೆಯ ಹಿರಿಯರನ್ನು ವಿಚಾರಿಸಿ ಇನ್ನೊಮ್ಮೆ ಹೇಳುತ್ತೇನೆ.
[ಸದ್ಯಕ್ಕೆ ನಿಲ್ಸುವ, ಉಳಿದ ಊಟ ಬ್ರೇಕ್‍ನ ನಂತರ ಪೂರೈಸಿದ್ರಾಯಿತು.......]

Subscribe to:
Posts (Atom)